ಮುದ್ದೇಬಿಹಾಳ : ಇಂದು ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಮುದ್ದೇಬಿಹಾಳ ತಾಲ್ಲೂಕಿನ ಕಾಳಗಿ, ಯರಝರಿ, ಹುಲ್ಲೂರ ಹಾಗೂ ಅಡವಿ ಸೋಮನಾಳ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಗ್ರಾಮೀಣಾಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ಪರಿಶೀಲಿಸಿದರು. ಪ್ರಗತಿಯಲ್ಲಿರುವ ಕಾಮಗಾರಿಗಳ ಕುರಿತು ಪಂಚಾಯತಿ ಅಭಿವೃದ್ಧಿ ಅದಿಕಾರಿಗಳೊಂದಿಗೆ ಚರ್ಚಿಸಿದರು. ನಂತರ ಮಹಾತ್ಮಗಾಂಧಿ ನರೇಗಾ ಯೋಜನೆಯ 1 ರಿಂದ 7 ವಹಿಗಳನ್ನು ಪರಿಶೀಲಿಸಿ ನಿಯಮನುಸಾರವಾಗಿ 7 ವಹಿಗಳನ್ನು ಸಿದ್ಧಪಡಿಸುವಂತೆ ಗ್ರಾಮ ಪಂಚಾಯತಿಯ ಸಿಬ್ಬಂಧಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು. ಇದೇ ವೇಳೆ ವಿವಿಧ ಯೋಜನೆಗಳ ಬಗ್ಗೆ ನಿಗಾವಹಿಸಿ ಉತ್ತಮ ಪ್ರಗತಿ ಸಾಧಿಸಲು ಸೂಚಿಸಿದರು. ಗ್ರಾಮ ಪಂಚಾಯತಿಯ ಸಿಬ್ಬಂಧಿಗಳ ಹಾಜರಾತಿ ಪರಿಶೀಲಿಸಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದರು. ಇದೇ ವೇಳೆ ಕಾಳಗಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದ ಹಾನಿಗೊಳಗಾದ ಚಲಮಿ ಗ್ರಾಮದಿಂದ ಮುದೂರ ತಾಂಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ವೀಕ್ಷಿಸಿ ತ್ವರಿತವಾಗಿ ರಸ್ತೆ ಅಭಿವೃದ್ಧಿ ಮಾಡುವಂತೆ PRED ಕಾರ್ಯನಿರ್ವಾಹಕ ಅಭಿಯಂತರರಾದ ಪಿ.ಎಸ್ ಚೌವ್ಹಾಣ ಅವರಿಗೆ ಸೂಚಿಸಿದರು. ನಂತರ ಅಡವಿ ಸೋಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಹಾನಿಗೊಳಗಾದ ಅಡವಿ ಹುಲಗಬಾಳ ಗ್ರಾಮದಿಂದ ಅಡವಿ ಹುಲಗಬಾಳ ತಾಂಡಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ವೀಕ್ಷಿಸಿದರು. ಹಳ್ಳದಲ್ಲಿ ರಭಸವಾಗಿ ನೀರು ಹರಿಯುತ್ತಿರುವುದರಿಂದ ಗ್ರಾಮಸ್ಥರಿಗೆ ಹಳ್ಳ ದಾಟಲು ತೊಂದರೆಯಾಗುತ್ತಿದ್ದು, ತ್ವರಿತವಾಗಿ ಸೇತುವೆ ನಿರ್ಮಾಣ ಮಾಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಮುದ್ದೇಬಿಹಾಳ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ವಾಯ್ ಹೊಕ್ರಾಣಿ, ತಾಲೂಕು ಯೋಜನಾಧಿಗಳಾದ .ಕೆ.ಎಸ್ ಜಾಧವ, PRED ತಾಂತ್ರಿಕ ಅಭಿಯಂತರ ಪ್ರವೀಣ ಬಿರಾದಾರ, ಹುಲ್ಲೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀ.ಇ.ಎಸ್ ಹಿರೇಮಠ, ಕಾಳಗಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಬಿ.ಎಸ್ ಹಿರೇಕುರುಬರ, ಯರಝರಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ. ವಿಜಯ ಮುದಗಲ್ಲ, ಅಡವಿ ಸೋಮನಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಜಯ ಮಹಾಂತೇಶ ಕೋರಿ ಹಾಗೂ ಇತರರು ಹಾಜರಿದ್ದರು.
